ಡಿಸಿಎಂ ಹುದ್ದೆ ಅಂದರೆ ಏನು?ಉಪ ಮುಖ್ಯಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಅವಕಾಶವಿದೆಯೇ?
ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಬಹುಮತ ಪಡೆದು ಗೆದ್ದ ಕಾಂಗ್ರೆಸ್ ಗೆ ಎದುರಾದ ಸಮಸ್ಯೆ ಮುಖ್ಯಮಂತ್ರಿ ಯಾರು ಎನ್ನುವುದಾಗಿತ್ತು. ಏಕೆಂದರೆ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಸಹಾ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಹೈಕಮಾಂಡ್ ಮಾತಿಗೆ ಕೂಡಾ ಅವರು ಜಗ್ಗಿರಲಿಲ್ಲ. ಅನಂತರ ಹೇಗೋ ಮಾತುಕತೆಗಳನ್ನು ನಡೆಸಿ ಸಿದ್ಧರಾಮಯ್ಯ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆಯಾದರೂ ಎಲ್ಲೋ ಒಂದು ಕಡೆ ಈ ಸ್ಥಾನದ ಬಗ್ಗೆ ಅಸಹನೆ, ಅಸಮಾಧಾನಗಳು ಇನ್ನೂ ಇದೆ ಎನ್ನುವುದು ಸತ್ಯ.
ಡಿಸಿಎಂ ಪೋಸ್ಟ್ ಗೆ ಯಾಕೆ ಅಸಮಾಧಾನ ಅನ್ನೋದನ್ನು ತಿಳಿಯೋಣ ಬನ್ನಿ. ಉಪ ಮುಖ್ಯಮಂತ್ರಿ ಅನ್ನುವಂತರ ಒಂದು ಸ್ಥಾನ ಅಥವಾ ಅಧಿಕಾರವು ತಾಂತ್ರಿಕವಾಗಿ ಸಾಂವಿಧಾನಿಕ ಹುದ್ದೆಯಾಗಿಲ್ಲ. ಆದ್ದರಿಂದ ಈ ಹುದ್ದೆಗೆ ಯಾವುದೇ ನಿರ್ದಿಷ್ಟ ಅಧಿಕಾರವನ್ನು ನೀಡಲಾಗಿಲ್ಲ. ಸಾಮಾನ್ಯವಾಗಿ ಉಪಮುಖ್ಯಮಂತ್ರಿ ಸ್ಥಾನವು ಗೃಹಮಂತ್ರಿ ಅಥವಾ ಹಣಕಾಸು ಸಚಿವರಂತಹ ಪ್ರಮುಖ ಕ್ಯಾಬಿನೆಟ್ ಪೋರ್ಟ್ ಪೋಲಿಯೋವನ್ನು ಹೊಂದಿರುತ್ತೆ. ಇನ್ನು ಈ ಸ್ಥಾನವನ್ನು ಸಮ್ಮಿಶ್ರ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಅವರೊಳಗೆ ರಾಜಕೀಯ ಸ್ಥಿರತೆ ಮತ್ತು ಬಲವನ್ನು ತರೋದಿಕ್ಕೆ ಈ ಸ್ಥಾನವನ್ನು ಸೃಷ್ಟಿಸಲಾಗುತ್ತೆ.
ವಾಸ್ತವ ವಿಚಾರಕ್ಕೆ ಬಂದ್ರೆ ಉಪಮುಖ್ಯಮಂತ್ರಿ ಹುದ್ದೆಗೆ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವರಿಗಿಂತ ಹೆಚ್ಚಿನ ಮಹತ್ವವನ್ನು ನೀಡಲಾಗಿಲ್ಲ. ಆದರೆ ಇದೇ ವೇಳೆ ಒಂದು ಪ್ರಮುಖ ಇಲಾಖೆಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿಗೆ ನೀಡಲಾಗಿರುತ್ತೆ. ಅಷ್ಟು ಬಿಟ್ರೆ ಅವರಿಗೆ ಬೇರೆ ಯಾವುದೇ ರೀತಿಯಲ್ಲೂ ಹೆಚ್ಚಿನ ಅಧಿಕಾರ ಇರೋದಿಲ್ಲ. ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಬಂದ್ರೆ ರಾಜ್ಯದಲ್ಲಿ 1ನೇ ವರ್ಗದ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಅಧಿಕಾರ ಮುಖ್ಯಮಂತ್ರಿಗಳಿಗೆ ಮಾತ್ರವೇ ಇರುತ್ತೆ.
ಈ ವಿಚಾರದಲ್ಲಿ ಉಪಮುಖ್ಯಮಂತ್ರಿ ಅವರಿಗೆ ಯಾವುದೇ ಅಧಿಕಾರ ಇರೋದಿಲ್ಲ. ಸರ್ಕಾರದ ಇತರೆ ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಇರುವಂತಹ ವೇತನ ಮತ್ತು ಸವಲತ್ತುಗಳನ್ನು ಒಬ್ಬ ಉಪಮುಖ್ಯಮಂತ್ರಿಗೆ ನೀಡಲಾಗಿರುತ್ತೆ. ಇದರ ಹೊರತಾಗಿ ಅವರು ತೆರಿಗೆ-ಮುಕ್ತ ಪಾವತಿ ಮತ್ತು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆಡಳಿತದ ವಿಷಯಗಳಲ್ಲಿ, ಮುಖ್ಯಮಂತ್ರಿಗಳಿಗೆ ಮೀಸಲಿಟ್ಟಿರುವ ಕಡತಗಳನ್ನು ನೋಡುವ ಯಾವುದೇ ಅಧಿಕಾರವು ಉಪಮುಖ್ಯಮಂತ್ರಿಗೆ ಇರುವುದಿಲ್ಲ. ಇನ್ನೊಂದು ಮುಖ್ಯವಾದ ಸಂಗತಿ ಏನೆಂದರೆ ಉಪಮುಖ್ಯಮಂತ್ರಿಗೆ ನೀಡಲಾಗಿರುವ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಫೈಲ್‌ಗಳನ್ನು ಅವರು ಕ್ಲಿಯರೆನ್ಸ್‌ಗಾಗಿ ಮುಖ್ಯಮಂತ್ರಿಗೆ ರವಾನಿಸಬೇಕು.
ಉಪಮುಖ್ಯಮಂತ್ರಿಯಾಗಿರುವವರಿಗೆ ತಾನೇ ಸಂಪುಟ ಸಭೆಯ ಅಧ್ಯಕ್ಷತೆಯನ್ನು ವಹಿಸುವುದಕ್ಕಾಗಲೀ ಅಥವಾ ಮುಖ್ಯಮಂತ್ರಿಗಳು ತನಗೆ ನಿಗಧಿಪಡಿಸಿರುವ ಇತರೆ ಇಲಾಖೆಗಳಿಗೆ ನಿರ್ದೇಶನ ನೀಡುವ ಅಧಿಕಾರವು ಇರುವುದಿಲ್ಲ. ಅವರು ಬೇರೆ ಸಚಿವರ ಹಾಗೆ ತಮ್ಮ ಇಲಾಖೆಗಳಿಗೆ ಮೀಸಲಿಟ್ಟಿರುವ ಬಜೆಟ್ ಗಿಂತ ಹೆಚ್ಚಿನ ಹಣ ಬೇಕು ಎಂದಾಗ ಈ ವಿಚಾರದಲ್ಲಿ ಮುಖ್ಯಮಂತ್ರಿ ಅವರಿಂದ ಕ್ಲಿಯರೆನ್ಸ್ ಪಡೆಯಬೇಕು.
ಸಾಮಾನ್ಯವಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರುವಾಗ ಹೆಚ್ಚಿನ ಮಹತ್ವ ಇರುತ್ತದೆ. ಆಗ ಆ ನಾಯಕನನ್ನು ನಂಬರ್ 2 ಎಂದೇ ಪರಿಗಣಿಸಲಾಗುತ್ತದೆ. ಪ್ರಮಾಣ ವಚನ ಸ್ವೀಕಾರದಲ್ಲಿ, ಉಪಮುಖ್ಯಮಂತ್ರಿಗೆ ಪ್ರತ್ಯೇಕ ಪ್ರಮಾಣವಚನವನ್ನು ಒದಗಿಸುವುದಿಲ್ಲ. ಕರ್ನಾಟಕದಲ್ಲಿ ಡಿಸಿಎಂ ಹುದ್ದೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಉಪ ಮುಖ್ಯಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಅವಕಾಶವಿಲ್ಲದೇ ಇದ್ದರೂ, ಪ್ರತಿಯೊಂದು ಸರ್ಕಾರದಲ್ಲೂ ಇದನ್ನು ಮಾಡಲಾಗುತ್ತಿದೆ. ಸಂವಿಧಾನದ ಅನುಚ್ಛೇಧ 163-164 ರಲ್ಲಿ ಎಲ್ಲೂ ಕೂಡಾ ಇಂತಹುದೊಂದು ನೇಮಕಾತಿಯ ಬಗ್ಗೆ ಪ್ರಸ್ತಾಪ ಮಾಡಲಾಗಿಲ್ಲ. ಆದ್ದರಿಂದಲೇ ಈಗ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿಯೂ, ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖವೇ ಇಲ್ಲದ ಉಪ-ಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಲು ಅವಕಾಶ ನೀಡಬಾರದು ಎಂದಿದ್ದಾರೆ.