ಅಕ್ಷಯ ತೃತೀಯ ಜೊತೆಗೆ ಬೆಸುದುಕೊಂಡ ಪೌರಾಣಿಕ ಕಥೆಗಳಿವು: ಪುಣ್ಯ ದಿನದ ಧಾರ್ಮಿಕ ಮಹತ್ವ ತಿಳಿಯಲೇಬೇಕು

Featured-Article

ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಣೆ ಮಾಡಲಾಗುತ್ತದೆ. ಅಕ್ಷಯ ತೃತೀಯಕ್ಕೆ ಹಿಂದೂಗಳಲ್ಲಿ ಬಹಳ ವಿಶೇಷವಾದ ಮಾನ್ಯತೆಯಿದೆ.‌ ಈ ದಿನದಂದು ಏನಾದರೂ ಖರೀದಿ ಮಾಡಿದರೆ ಅಥವಾ ಈ ದಿನದಂದು ಹೆಚ್ಚು ದಾನ ಧರ್ಮಗಳನ್ನು ಕೂಡಾ ಮಾಡುತ್ತಾರೆ.

ಏಕೆಂದರೆ ಈ ದಿನ ಮಾಡಿದ ಖರೀದಿ ಅಥವಾ ಮಾಡಿದ ಶುಭ ಕಾರ್ಯಗಳ ಫಲ ಕೂಡಾ ಶುಭಪ್ರದವಾಗಿರುತ್ತದೆ ಎನ್ನುವುದು ನಂಬಿಕೆ. ಧಾರ್ಮಿಕ ಮಹತ್ವವನ್ನು ಹೊಂದಿರುವ ಅಕ್ಷಯ ತೃತೀಯವು ತ್ರೇತಾಯುಗದಲ್ಲಿ ಆರಂಭವಾಯಿತು ಎನ್ನಲಾಗಿದೆ.‌

ಇದೇ ದಿನ ಭಗವಾನ್ ವಿಷ್ಣುವು ಪರಶುರಾಮ ಅವತಾರದಲ್ಲಿ ಬಂದನೆಂದು ಹೇಳಲಾಗುತ್ತದೆ. ಅಲ್ಲದೇ ಇದೇ ದಿನ ಮಹಾ ಶಿವನು ಗಂಗೆಗೆ ಭಗೀರಥನ ಪೂರ್ವಜರ ಆತ್ಮಗಳನ್ನು ಶುದ್ಧೀಕರಣ ಮಾಡಲು ಹೇಳಿದ ಎನ್ನಲಾಗಿದೆ. ಆದ್ದರಿಂದಲೇ ಈ ದಿನದಂದು ಗಂಗಾ ಸಪ್ತಮಿ ದಿನವನ್ನು ಆಚರಿಸಲಾಗುತ್ತದೆ.

ಇದಲ್ಲದೇ ಶ್ರೀಕೃಷ್ಣನು ತನ್ನ ಪರಮಾಪ್ತನಾದ ಸುಧಾಮನು ತನ್ನನ್ನು ಭೇಟಿ ಮಾಡಲು ಬಂದಾಗ ಆತ ತಂದಿದ್ದ ಅವಲಕ್ಕಿಯನ್ನು ನೀಡಲು ಹಿಂಜರಿದಾಗ, ಕೃಷ್ಣನೇ ಅದನ್ನು ಸ್ವೀಕರಿಸಿ, ಅನಂತರ ಸುಧಾಮನಿಗೆ ಅಷ್ಟೈಶ್ವರ್ಯಗಳನ್ನು ಕರುಣಿಸಿದ ದಿನ ಕೂಡಾ ಅಕ್ಷಯ ತೃತೀಯ ಎನ್ನಲಾಗಿದೆ. ಪಾಂಡವರು ಅರಣ್ಯ ವಾಸದಲ್ಲಿ ಇದ್ದಾಗ ಅವರ ಸಂಕಷ್ಟವೊಂದನ್ನು ಪರಿಹರಿಸಲು ಅವರಿಗೆ ಅಕ್ಷಯ ಪಾತ್ರೆ ದೊರೆತ ಪರ್ವ ದಿನ ಸಹಾ ಅಕ್ಷಯ ತೃತೀಯದ ದಿನವೇ ಆಗಿದೆ.

ಅಲ್ಲದೇ ಪಾಂಡವರು ಜೂಜಿನಲ್ಲಿ ಪತ್ನಿ ಸಹಿತ ಎಲ್ಲವನ್ನೂ ಸೋತಾಗ, ತುಂಬಿದ ಸಭೆಯಲ್ಲಿ ದುರುಳ ದುಶ್ಯಾಸನನು ದ್ರೌಪದಿಯ ಸೀರೆ ಸೆಳೆದು ಮಾ ನಾ ಪಹರಣ ಮಾಡುವಾಗ ಆಕೆಯ ಒಂದು ಕೂಗಿಗೆ ನೆರವಿಗೆ ಶ್ರೀಕೃಷ್ಣ ಧಾವಿಸಿ ಬಂದು, ಎಷ್ಟು ಸೆಳೆದರೂ ಮುಗಿಯದ ವಸ್ತ್ರವನ್ನು ನೀಡಿದ್ದು ಕೂಡಾ ಇದೇ ಅಕ್ಷಯ ತೃತೀಯದ ಪರ್ವ ದಿನ.

ವೇದವ್ಯಾಸರು ಮಹಾಭಾರತ ಬರೆಯಲು ಆರಂಭಿಸಿದ ಸುದಿನ, ಕುಬೇರನು ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಿ ಸಿರಿವಂತನಾಗಿದ್ದು, ಹೀಗೆ ಅನೇಕ ಪುಣ್ಯ ಪುರಾಣ ಕಥೆಗಳು ಅಕ್ಷಯ ತೃತೀಯದೊಂದಿಗೆ ತಳಕು ಹಾಕಿಕೊಂಡಿವೆ. ಆದ್ದರಿಂದಲೇ ಈ ದಿನ ಏನೇ ಖರೀದಿ ಮಾಡಿದರೂ ಅದು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ಈ ದಿನ ಮಾಡುವ ಯಾವುದೇ ಕಾರ್ಯ, ಆರಂಭಿಸುವ ವ್ಯವಹಾರ ದಿನೇ ದಿನೇ ವೃದ್ಧಿಯಾಗುತ್ತದೆ ಎನ್ನುವುದು ನಂಬಿಕೆ. ಅದಕ್ಕೆ ಅಕ್ಷಯ ತೃತೀಯದ ದಿನ ಶುಭ ಕಾರ್ಯಕ್ಕೆ ಯಾವುದೇ ವಿಶೇಷ ಮುಹೂರ್ತದ ಅಗತ್ಯ ಇರುವುದಿಲ್ಲ. ಈ ಇಡೀ ದಿನವೂ ಕೂಡಾ ಶುಭ ದಿನವಾಗಿರುತ್ತದೆ. ನಮ್ಮಲ್ಲಿ ಜನರು ಈ ದಿನದಂದು ಬಂಗಾರ ಖರೀದಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು ಇತ್ತೀಚಿನ ವರ್ಷಗಳಲ್ಲಿ ಒಂದು ಟ್ರೆಂಡ್ ಆಗಿದೆ.

Leave a Reply

Your email address will not be published.