ಮೈತುಂಬ ಬಿಳಿಯ ಹೂಗಳನ್ನು ಹೊದ್ದು ನಿಂತಂತೆ ಕಾಣುವ ಈ ಹೂವಿನ ಗಿಡವನ್ನು ನೀವು ನೋಡಿರ್ತೀರ,
ಮನೆಯ ಹಿತ್ತಲಲ್ಲಿ , ಪಾರ್ಕುಗಳಲ್ಲಿ ಸಮೃದ್ಧವಾಗಿ ಬೆಳೆಯುವ ಈ ಗಿಡದ ಕೊಂಬೆ ಕೊಂಬೆಗಳಲ್ಲು ಗೊಂಚಲು ಗೊಂಚಲು ಹೂವುಗಳು ನಳನಳಿಸುತ್ತಿರುತ್ತವೆ.
ಈ ಗಿಡದಲ್ಲಿ ಅರಳುವ ಏಳೆಂಟು ಎಸಳುಗಳ ಚಕ್ರಾಕಾರದ ಹೂವುಗಳಂತು ಅತ್ಯಂತ ಸುಗಂಧ ಭರಿತವಾಗಿರುತ್ತದೆ.ಸಾಮಾನ್ಯವಾಗಿ ಎಲ್ಲ ಪುಷ್ಪಗಳು ಸೂರ್ಯೋದಯ ಕಾಲದಲ್ಲಿ ಅರಳುತ್ತದೆ
ಆದ್ರೆ ಇದೊಂದು ಹೂ ಮಾತ್ರ ಸಂಜೆ ಸೂರ್ಯ ಮುಳುಗುವ ಹೊತ್ತಲ್ಲಿ ಅರಳಿ ನಳನಳಿಸುತ್ತದೆ.ಸಂಜೆಯ ತಣ್ಣನೆಯ ಗಾಳಿಯಲ್ಲಿ ಇದರ ಸುಗಂಧ ಸೇರಿ ಬಿಟ್ಟರಂತೂ ಅಲ್ಲೊಂದು ಆಹ್ಲಾದಕರ ವಾತಾವರಣವೇ ಸೃಷ್ಟಿಯಾಗಿಬಿಡುತ್ತದೆ.ಮುಂಜಾನೆ ಸೂರ್ಯ ಹುಟ್ಟುವ ಹೊತ್ತಿಗೆ ಮನೆಯ ಮುಂದಿನ ಅಂಗಳದ ತುಂಬೆಲ್ಲಾ ಹರಡಿಕೊಳ್ಳುವ ಈ ಶ್ವೇತಾಂಬರಿ ಹೂವು ರಂಗವಲ್ಲಿಗೆ ಇನ್ನಷ್ಟು ಅಂದವನ್ನು ತುಂಬಿ ಬಿಡುತ್ತದೆ.
ಈ ಶ್ವೇತಾಂಬರಿ ಹೂವಿನ ಹೆಸರು ಪಾರಿಜಾತ.
ಇದನ್ನು ದೇವ ಪುಷ್ಪ ಅಂತಲೂ ಕರೆಯಲಾಗುತ್ತದೆ.ನಮ್ಮಲ್ಲಿ ಒಂದು ಪದ್ಧತಿಯಿದೆ ಸಾಮಾನ್ಯವಾಗಿ ಗಿಡದಿಂದ ನೆಲಕ್ಕೆ ಉದುರಿದ ಹೂವುಗಳನ್ನು ದೇವರ ಪೂಜೆಗೆ ಬಳಸೋದಿಲ್ಲ ಆದ್ರೆ ಪಾರಿಜಾತವನ್ನು ಪೂಜೆಗಷ್ಟೇ ಅಲ್ಲ ಆಯುರ್ವೇದ ಔಷಧವಾಗಿಯೂ ಬಳಸಲಾಗುತ್ತದೆ.ತುಂಬೆ , ದತ್ತೂರದಂತ ಔಷಧಯುಕ್ತ ಪುಷ್ಪಗಳ ಪೈಕಿ ಈ ಪಾರಿಜಾತಕ್ಕೆ ಮೊದಲ ಸ್ಥಾನ.ಯಾಕೆಂದ್ರೆ ಸುಗಂಧದ ಜೊತೆಗೆ ಅದ್ಭುತ ಔಷಧೀಯ ಗುಣಗಳು ಈ ಪಾರಿಜಾತ ಪುಷ್ಪದಲ್ಲಿ ಇವೆ.
ಇಷ್ಟಕ್ಕೂ ಆಯುರ್ವೇದದಲ್ಲಿ ಈ ಪುಷ್ಪ ಯಾವೆಲ್ಲ ಕಾಯಿಲೆಗಳಿಗೆ ಮೂಲಿಕೆಯಾಗಿ ಬಳಕೆಯಾಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ…
ಆದರೆ ಅದಕ್ಕೂ ಮುನ್ನ ಪಾರಿಜಾತ ಪುಷ್ಪದ ಹಿಂದಿರುವ ಪೌರಾಣಿಕ ಕಥೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.
ಸಮುದ್ರ ಮಂಥನ ಕಾಲದಲ್ಲಿ ಕ್ಷೀರ ಸಾಗರದಿಂದ ಹುಟ್ಟಿಬಂದ 5 ವೃಕ್ಷಗಳ ಪೈಕಿ ಈ ಪಾರಿಜಾತ ವೃಕ್ಷವು ಒಂದು.
ಕಲ್ಪವೃಕ್ಷ ಹಾಗೂ ಕಾಮಧೇನುವನ್ನು ಋಷಿಗಳಿಗೆ ಕೊಟ್ಟ ಇಂದ್ರ ,ಇಂದ್ರಾಣಿ ಗಾಗಿ ಪಾರಿಜಾತವನ್ನು ತನ್ನ ನಂದನ ವನಕ್ಕೆ ಕೊಂಡೊಯ್ದನಂತೆ.
ಆ ಬಳಿಕ ಶ್ರೀಕೃಷ್ಣ ತನ್ನ ಸತ್ಯಭಾಮೆಗಾಗಿ ಪಾರಿಜಾತವನ್ನು ಭೂಲೋಕಕ್ಕೆ ತಂದನಂತೆ.ಇದಿಷ್ಟೇ ಅಲ್ಲ ಪಾರಿಜಾತ ಪುಷ್ಪದ ಹಿಂದೆ ಮತ್ತೊಂದು ಪೌರಾಣಿಕ ಕಥೆಯೂ ಇದೆ.
ಆ ಕಥೆ ಪ್ರಕಾರ ಹಿಂದೆ ಪಾರಿಜಾತ ಎನ್ನುವ ಒಬ್ಬ ರಾಜಕುಮಾರಿ ಇದ್ದಳಂತೆ ,ಆಕೆ ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಪ್ರೀತಿಸಿದಳಂತೆಆದ್ರೆ ಅದ್ಯಾಕೋ ಏನೋ ಸೂರ್ಯ ಕೆಲವೇ ದಿನಗಳಲ್ಲಿ ಈಕೆಯನ್ನು ತೊರೆದು ಬಿಟ್ಟನಂತೆ ಅದೇ ನೋವಿನಲ್ಲಿ ರಾಜಕುಮಾರಿ ಪಾರಿಜಾತ ಆತ್ಮಹತ್ಯೆ ಮಾಡಿಕೊಂಡಳಂತೆ.
ವಿಶೇಷ ಅಂದ್ರೆ ಅವಳ ದೇಹದ ಬೂದಿಯಿಂದ ಹುಟ್ಟಿಕೊಂಡ ಗಿಡಕ್ಕೆ ಪಾರಿಜಾತ ಎನ್ನುವ ಹೆಸರು ಬಂತು ಅನ್ನುತ್ತೆ ಆ ಪೌರಾಣಿಕ ಕಥೆ.
ಪಾರಿಜಾತ ಗಿಡ ಹೇಗೆ ಹುಟ್ಟಿಕೊಳ್ತು ಅನ್ನೋ ಬಗ್ಗೆ ಇರೋ ಈ ಪೌರಾಣಿಕ ಕಥೆಗಳು ಅದೇನೇ ಇರಲಿ
ಆದ್ರೆ ಇಷ್ಟೆಲ್ಲಾ ಪೌರಾಣಿಕ ಹಿನ್ನೆಲೆ ಹೊಂದಿರುವ ಪಾರಿಜಾತ ಪುಷ್ಪ ರೋಗಿಗಳ ಪಾಲಿಗೆ ಕಲ್ಪ ವೃಕ್ಷ ಅಂದ್ರೆ ತಪ್ಪಾಗುವುದಿಲ್ಲ.
ನೋಡೋಕೆ ಸೂಜಿ ಮಲ್ಲಿಗೆಯಂತೆ ಕಾಣುವ ಈ ಹೂವು ಯಾವೆಲ್ಲ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ ಅಂತ ಹೇಳ್ತೀವಿ ಬನ್ನಿ..
ಸಸ್ಯ ಶಾಸ್ತ್ರಜ್ಞರು ಈ ಹೂವನ್ನು ನೈಟ್ ಜಾಸ್ಮಿನ್ ಅಂತಲೇ ಕರೀತಾರೆ.ಸಂಸ್ಕೃತದಲ್ಲಿ ಶೇಫ್ಹಾಲಿಕಾ , ಬೆಂಗಾಲಿಯಲ್ಲಿ ಹರ್ ಸಿಂಗಾರ್ , ತಮಿಳಿನಲ್ಲಿ ಮಂಜು ಹೂವು ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪಾರಿಜಾತ ಪುಷ್ಪ ಆರ್ಥರೈಟಿಸ್ ಗೆ ದಿವ್ಯ ಔಷಧವಾಗಿ ಕೆಲಸ ಮಾಡುತ್ತೆ.ಕುಂತ್ರು ನಿಂತ್ರು ಕಾಡು ಕೀಲು ನೋವು ಎಷ್ಟು ಹಿಂಸಾತ್ಮಕ ಅನ್ನೋದು ಅನುಭವಿಸಿದವರಿಗೆ ಗೊತ್ತಿರುತ್ತೆ .
ದೇಹದ ಪ್ರತಿ ಕೀಲುಗಳಲ್ಲಿ ಉಂಟಾಗುವ ಆ ಭಯಾನಕ ನೋವಿದೆಯಲ್ಲ ಅದು ನಿಜಕ್ಕೂ ಯಾತನಾಮಯ. ಅಂಥದ್ದೊಂದು ಹಿಂಸಾತ್ಮಕ ಆರ್ಥರೈಟಿಸ್ ಗೆ ಪಾರಿಜಾತ ಎಲೆಗಳಿಂದ ಮಾಡಿದ ಕಷಾಯ ಅದ್ಭುತ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
ಪಾರಿಜಾತದ ಎಲೆಗಳಿಂದ ತಯಾರಿಸಿದ ಕಷಾಯವಂತೂ ಹಲವು ಕಾಯಿಲೆಗಳಿಗೆ ದಿವ್ಯ ಔಷಧವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಮುಂಜಾನೆ ಈ ಎಲೆಗಳಿಂದ ಮಾಡಿದ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಆರ್ಥ್ರೈಟಿಸ್ ಸಾಕಷ್ಟು ನಿಯಂತ್ರಣಕ್ಕೆ ಬರುತ್ತದೆ. ಮಲಬದ್ಧತೆಯಿಂದ ಬಳಲುವವರಿಗೂ ಕೂಡ ಈ ಕಷಾಯ ಪ್ರಯೋಜನಕಾರಿಯಾಗಿದೆಜೊತೆಗೆ ಜಂತು ಹುಳು ಹಾಗೂ ಕೆಮ್ಮನ್ನು ನಿವಾರಿಸುವ ಶಕ್ತಿ ಪಾರಿಜಾತ ಎಲೆಗಳಿಂದ ಮಾಡಿದ ಕಷಾಯಕ್ಕೆ ಇದೆ.
ಎಲೆಯಂತೆ ಪಾರಿಜಾತದ ಬೀಜಗಳನ್ನು ಕೂಡ ಔಷಧವಾಗಿ ಬಳಲಾಗುತ್ತದೆ.ವಿಶೇಷವಾಗಿ ಇದರ ಬೀಜಗಳಿಂದ ಮಾಡಿದ ಪುಡಿಯನ್ನು ಜಾಂಡೀಸ್ ನಿವಾರಣೆಗೆ ಬಳಸಲಾಗುತ್ತದೆ. ಇನ್ನು ಪಾರಿಜಾತ ಬೀಜಗಳಿಂದ ಪೌಡರ್ ತಯಾರಿಸೋದು ಹೇಗೆ ಅನ್ನುವ ಬಗ್ಗೆ ಸುಶ್ರುತ ಸಂಹಿತೆಯಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಇನ್ನು ಹೆಣ್ಣುಮಕ್ಕಳು ಪಾರಿಜಾತದ ಎಲೆಗಳನ್ನು ಮುಖದ ಸೌಂದರ್ಯ ವರ್ಧಕ ವಾಗಿಯೂ ಬಳಸ್ತಾರೆ.
ಎಲೆಗಳನ್ನು ಅರೆದು ಹಚ್ಚಿ ಒಂದು ಗಂಟೆಯ ನಂತರ ತೊಳೆದರೆ ಮುಖ ಕೋಮಲ ಹಾಗೂ ಕಾಂತಿಯುಕ್ತವಾಗುತ್ತದೆ. ವಿಶೇಷ ಅಂದ್ರೆ ಪಾರಿಜಾತ ಹೂವಿಗೆ ನಮ್ಮ ತಲೆ ನೋವನ್ನು ಹೋಗಲಾಡಿಸುವ ಗುಣ ಇದೆ ಅಷ್ಟೇ ಅಲ್ಲ ಇದರ ಪರಿಮಳ ಭರಿತ ಹೂವನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ.
ಧನ್ಯವಾದಗಳು.