Kannada News ,Latest Breaking News

ಔಷಧಿ ಗುಣವನ್ನು ಹೊಂದಿರುವ ಹಣ್ಣು ಬೇಸಿಗೆಕಾಲದಲ್ಲಿ ಈ ಹಣ್ಣಿಗೆ ಫುಲ್ ಡಿಮ್ಯಾಂಡ್!

0 3,577

Get real time updates directly on you device, subscribe now.

ವೃತ್ತಾಕಾರದ ಚಿಕ್ಕ ಚಿಕ್ಕ ಕನ್ನಡಿಗಳನ್ನು ಹಚ್ಚಿದ ವಿಶಿಷ್ಟ ಪೋಷಾಕು ತೊಟ್ಟು, ಕೈತುಂಬಾ ಬಿಳಿಬಣ್ಣದ ದಪ್ಪ, ದಪ್ಪ ಬಳೆ ಧರಿಸಿ, ಕಾಲುಗಳಲ್ಲಿ ಗೆಜ್ಜೆ ಕಟ್ಟಿಕೊಂಡ ಲಂಬಾಣಿ ಮಹಿಳೆಯರು ಬಿದಿರಿನ ಬುಟ್ಟಿ ತುಂಬಾ ಕವಳಿ (ಕೌಳಿ) ಹಣ್ಣು ಹೊತ್ತುಕೊಂಡು ಹಳ್ಳಿ-ಹಳ್ಳಿಗೆ ಬರುತ್ತಿದ್ದರು.

ಪ್ರತಿಯೊಂದು ಓಣಿಗೆ ಬಂದು ‘ಕವಳಿ ಹಣ್ಣವೋ…’ ಎಂದು ಕೂಗು ಹಾಕುತ್ತಿದ್ದರು. ಅವರಲ್ಲಿ ಹಣ್ಣುಗಳನ್ನು ಕೊಂಡುಕೊಳ್ಳಲು ನಾವು ಜೋಳ ಆಥವಾ ಭತ್ತವನ್ನು ಮನೆಯಲ್ಲಿ ಕಳ್ಳತನ ಮಾಡುತ್ತಿದ್ದೆವು. ಅಜ್ಜ–ಅಜ್ಜಿ ಕೊಟ್ಟ ನಾಲ್ಕಾಣೆಯಿಂದಲೂ ಕವಳಿ ಹಣ್ಣು ಖರೀದಿಸುತ್ತಿದ್ದೆವು. ಉತ್ತರ ಕರ್ನಾಟಕದ ಬಹುತೇಕ ಊರುಗಳ ಸಂತೆಗಳಲ್ಲೂ ಲಂಬಾಣಿ ಮಹಿಳೆಯರು ಈ ಹಣ್ಣನ್ನು ತಂದು ಮಾರುತ್ತಿದ್ದುದು ರೂಢಿಯಾಗಿತ್ತು.

ಗುಡ್ಡಗಾಡಿನಲ್ಲಿ ಬೆಳೆದಿರುತ್ತಿದ್ದ ಕವಳಿ ಕಂಟಿಗಳನ್ನು ಹುಡುಕಿ, ಅದರ ಹಣ್ಣು ಹೆಕ್ಕಿ ತರುತ್ತಿದ್ದರು ಆ ಮಹಿಳೆಯರು. ಈಗ ಕವಳಿ ಕಂಟಿ ನೋಡಲು ಅಷ್ಟಾಗಿ ಸಿಗುತ್ತಿಲ್ಲ. ಹುಬ್ಬಳ್ಳಿ ಹತ್ತಿರದ ಬೂದನಗುಡ್ಡದಲ್ಲಿ ಒಂದೂವರೆ ದಶಕದ ಹಿಂದೆ ಅದೆಷ್ಟು ಕವಳಿ ಹಣ್ಣಿನ ಕಂಟಿಗಳು ಇದ್ದವು. ಚಿಕ್ಕವರಿದ್ದಾಗ ನಾವು ರಸ್ತೆಯ ಪಕ್ಕದಲ್ಲಿ ಅವುಗಳನ್ನು ನೋಡು ನೋಡುತ್ತಲೇ ಸಾಗುತ್ತಿದ್ದೆವು.

ಈ ಬೇಸಿಗೆಯಲ್ಲಿ ಕವಳಿ ಹಣ್ಣು ತರಲು ಆ ಗುಡ್ಡಕ್ಕೆ ಹೋದರೆ ಸುಮಾರು ನಾಲ್ಕರಿಂದ ಐದು ಕವಳಿ ಕಂಟಿಗಳು ಮಾತ್ರ ಕಣ್ಣಿಗೆ ಕಂಡವು. ಈ ಸಮಯ ಹಣ್ಣು ತಿನ್ನುವ ಕಾಲ. ಆದರೆ ಆ ಕಂಟಿಯಲ್ಲಿ ನೋಡಿದರೆ ಇನ್ನೂ ಕಾಯಿಯೇ ಇರಬೇಕೇ?

ಜನವರಿಯಿಂದ ಫೆಬ್ರುವರಿ ಅಂತ್ಯದವರೆಗೆ ಕಾಯಿ, ಮಾರ್ಚ್‌ನಿಂದ ಜೂನ್ ಅಂತ್ಯದವರೆಗೆ ಹಣ್ಣಿನ ಋತು. ಚಿಕ್ಕ ಪುಟ್ಟ ಹಣ್ಣಿನ ಕಂಟಿ, ಪೊದೆಗಳನ್ನು ಉಳಿಸುವಲ್ಲಿ ಯಾರಿಗೂ ಆಸಕ್ತಿ ಇಲ್ಲ. ಇದರಿಂದ ತಾಂಡಾದ ಮಹಿಳೆಯರಿಗೆ, ಅದಕ್ಕಿಂತ ಹೆಚ್ಚಾಗಿ ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ತಿನ್ನಲು ರಸವತ್ತಾದ (ಕಾರೆ, ಕವಳಿ ಮತ್ತು ಗಂಜಿ ಪಳಿ) ಹಣ್ಣಿನ ಗಿಡಗಳು ಉಳಿದಿಲ್ಲ.

ಈ ಹಣ್ಣು ತಿಂದಿರುವ ನೆನಪು ಇದ್ದೇ ಇರುತ್ತದೆ. ಆದರೂ ನಾನೊಮ್ಮೆ ನಿಮ್ಮ ಬಾಯಿಯಲ್ಲಿ ನೀರು ತರಿಸುತ್ತೇನೆ. ಗಿಡದಿಂದ ಕವಳಿ ಕಾಯಿ ಕೀಳುವಾಗ ಬಿಳಿಯ ಹಾಲಿನ ಬಣ್ಣದ ದ್ರವ ಹೊರಗೆ ಬರುತ್ತದೆ. ಎಷ್ಟೇ ಆದರೂ ಹುಳಿ-ಸಿಹಿ ಹಣ್ಣು. ಕೆಲವು ಹಣ್ಣುಗಳನ್ನು ತಿನ್ನುತ್ತಿದ್ದಂತೆ ಹುಳಿಯಿಂದಾಗಿ ನಾಲಗೆ ಚಪ್ಪರಿಸುವಂತೆ ಮಾಡುತ್ತದೆ. ಈ ಹಣ್ಣು ತಿನ್ನುವ ಮಜವೇ ಬೇರೆ.

ಹಿಂದೆ ದನಗಾಯಿಗಳು, ಕುರಿಗಾಹಿಗಳು ಈ ಭಾಗದ ಕಾಡುಗಳಲ್ಲಿ ಕವಳಿ, ಕಾರೆ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕವಳಿ ಕಾಯಿಗಳನ್ನು ಉಪ್ಪಿನಕಾಯಿ ತಯಾರಿಕೆಗೆ ಮತ್ತು ಅಡುಗೆಯಲ್ಲಿ ಹುಳಿಯ ಸ್ವಾದಕ್ಕಾಗಿ ಹಳ್ಳಿಗರು ಬಳಸುತ್ತಿದ್ದರು. ಈಗ ಕವಳಿ ಉಪ್ಪಿನಕಾಯಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ.

ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಪ್ರಾರಂಭವಾಗುವ ಇದು ಜೂನ್ ತಿಂಗಳ ವರೆಗೂ ಲಭ್ಯ. ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಇದು ಜೀವಸತ್ವಗಳ ಆಗರವೂ ಹೌದು. ಇತ್ತೀಚೆಗೆ ಇದನ್ನ ಉದರ ಮತ್ತು ಹೃದಯ ಸಂಬಂಧಿ ಖಾಯಿಲೆಗಳ ಔಷಧ ತಯಾರಿಕೆಯಲ್ಲೂ ಉಪಯೋಗಿಸುತ್ತಾರಾದರೂ ಇದರ ಲಭ್ಯತೆ ಕಡಿಮೆ ಆಗುತ್ತಿರುವುದು ಪ್ರಕೃತಿಯ ಶಾಪವೇ ಸರಿ.

Get real time updates directly on you device, subscribe now.

Leave a comment