Ashwini Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು ಇಂದು ನಮ್ಮೊಡನೆ ದೈಹಿಕವಾಗಿ ಇಲ್ಲ. ಅಪ್ಪು ಅವರು 2 ವರ್ಷಗಳ ಹಿಂದೆ, 2021ರ ಆಕ್ಟೊಬರ್ 29ರಂದು ಇಹಲೋಕ ತ್ಯಜಿಸಿದರು. ನಿನ್ನೆ ಅಪ್ಪು ಅವರ ಪುಣ್ಯಸ್ಮರಣೆ ದಿನ ಅವರ ಪುಣ್ಯಭೂಮಿಯ ಬಳಿ ಸಾವಿರಾರು ಜನ ಸೇರಿದ್ದರು. ಶಿವಣ್ಣ ಅವರು ಕೂಡ ಗೀತಕ್ಕ ಅವರ ಜೊತೆಗೆ ಬಂದು ಪೂಜೆ ಸಲ್ಲಿಸಿದರು. ಈ ಒಂದು ದಿನ ಬರಲೇಬಾರದಿತ್ತು ಎಂದೇ ಅಭಿಮಾನಿಗಳು ಬಯಸುತ್ತಾರೆ.
ಆ ಒಂದು ದಿನ ಬಂದಿಲ್ಲ ಅಂದ್ರೆ ಇಡೀ ಕರ್ನಾಟಕಕ್ಕೆ ಈ ನೋವು ಇರುತ್ತಿರಲಿಲ್ಲ ಎನ್ನುತ್ತಾರೆ ಪವರ್ ಸ್ಟಾರ್ ಫ್ಯಾನ್ಸ್. ಅಪ್ಪು ಅವರು ಇನ್ನಿಲ್ಲ ಎನ್ನುವ ನೋವು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ದುಃಖ ನೀಡಿದ ವಿಷಯ. ಸದಾ ನಗುನಗುತ್ತಾ, ಎಲ್ಲರೊಡನೆ ಒಳ್ಳೆಯ ಒಡನಾಟ ಇಟ್ಟುಕೊಂಡು, ಸಮಾಜ ಸೇವೆ ಮಾಡಿಕೊಂಡು ಬಂದವರು ಅಪ್ಪು. ಇಂದು ಅಪ್ಪು ಅವರು ಇಲ್ಲ ಎಂದರು ಕೂಡ ಅವರ ಅಭಿಮಾನಿಗಳು ಅಪ್ಪು ಅವರು ತೋರಿಸಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದಾರೆ.
ಅಪ್ಪು ಅವರಿಗೆ ಅಭಿಮಾನಿಗಳೇ ದೇವರು, ತಂದೆಯ ದಾರಿಯಲ್ಲೇ ನಡೆಯುತ್ತಿದ್ದ ವ್ಯಕ್ತಿ ಅಪ್ಪು. ಕಷ್ಟ ಎಂದು ಬಂದವರಿಗೆ ಸಹಾಯ ಮಾಡದೆ ಇರುತ್ತಿರಲಿಲ್ಲ. ಅವರಿಂದ ಎಷ್ಟು ಜನರಿಗೆ ಸಹಾಯ ಆಗಿದೆ ಎನ್ನುವ ವಿಷಯ ಗೊತ್ತಾಗಿದ್ದೆ ಅಪ್ಪು ಅವರ ಅಗಲಿಕೆ ನಂತರ. ಅಪ್ಪು ಅವರು ಹೋದಮೇಲೆ ಈಗ ಎಲ್ಲಾ ಕೆಲಸಗಳನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ಇದೀಗ ಅಶ್ವಿನಿ ಅವರು ಅಪ್ಪು ಅವರ ರೀತಿಯಲ್ಲೇ ಪುಟ್ಟ ಅಭಿಮಾನಿಗೆ ಧೈರ್ಯ ತುಂಬಿದ್ದಾರೆ.
ಅಪ್ಪು ಅವರ ಈ ಪುಟ್ಟ ಅಭಿಮಾನಿಯ ಹೆಸರು ಹರ್ಷ, ಈ ಅಭಿಮಾನಿಗೆ ಈಗ 6 ವರ್ಷ. ಅಪ್ಪು ಅವರ ದೊಡ್ಡ ಅಭಿಮಾನಿ ಆಗಿರುವ ಹರ್ಷನಿಗೆ ಬ್ಲಡ್ ಕ್ಯಾನ್ಸರ್, ಹರ್ಷನ ತಂದೆ ತಾಯಿ ಚಿತ್ರದುರ್ಗಕ್ಕೆ ಸೇರಿದವರು, ಕಷ್ಟದಲ್ಲಿರುವ ಇವರು ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರು. ಹರ್ಷ ಮಗುವಿನಿಂದಲು ಅಪ್ಪು ಅವರ ಅಭಿಮಾನಿ, ನಾಲ್ಕೂವರೆ ವರ್ಷ ಇದ್ದಾಗ ಅಪ್ಪು ಅವರು ಇಹಲೋಕ ತ್ಯಜಿಸುವ ಮುಂಚೆ ಇಂದಲೂ ಅಪ್ಪು ಅವರನ್ನು ಒಂದು ಸಾರಿ ನೋಡಬೇಕು ಎಂದು ಆಸೆ ಪಟ್ಟಿದ್ದ.
ಆದರೆ ಕ್ಯಾನ್ಸರ್ ಹಾಗೂ ಇನ್ನಿತರ ಕಾರಣಗಳಿಂದ ಸಾಧ್ಯ ಆಗಿರಲಿಲ್ಲ. ತಂದೆ ತಾಯಿ ಬಡವರಾಗಿದ್ದರು ಕೂಡ ಮಗನಿಗೆ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರು. ಆದರೆ ಈಗ ಡಾಕ್ಟರ್ ಕೂಡ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಗನ ಆಸೆಗಳನ್ನು ನೆರವೇರಿಸಬೇಕು ಎಂದು ಹೇಳಿದ್ದಾರೆ. ಅಪ್ಪು ಅವರ ಮನೆಯನ್ನು ನೋಡಬೇಕು ಎನ್ನುವುದು ಹರ್ಷನ ಆಸೆ ಆಗಿರುವ ಕಾರಣ, ಆಪ್ತರ ಮೂಲಕ ಅಶ್ವಿನಿ ಅವರಿಗೆ ವಿಷಯ ತಿಳಿಸಲಾಗಿದೆ. ಅಶ್ವಿನಿ ಅವರ ಹರ್ಷನ ಆರೋಗ್ಯದ ಬಗ್ಗೆ ತಿಳಿದು, ಮಗುವನ್ನು ಮನೆಗೆ ಕರೆಸಿದ್ದಾರೆ.
ಹರ್ಷನ ಜೊತೆಗೆ ಒಂದಷ್ಟು ಸಮಯ ಕಳೆದ ಅಶ್ವಿನಿ ಅವರು, ತಮ್ಮ ಕಾರ್ ನಲ್ಲೇ ಹರ್ಷನನ್ನು ಕಳಿಸಿ ಪಿ.ಆರ್.ಕೆ ಸ್ಟುಡಿಯೋವನ್ನು ಕೂಡ ತೋರಿಸಿದ್ದಾರೆ. ಹಾಗೆಯೇ ಹರ್ಷನ ತಂದೆ ತಾಯಿಗೆ ಧೈರ್ಯ ನೀಡಿ, ಸಹಾಯ ಬೇಕಿದ್ದರೆ ಕೇಳಿ ಎಂದು ಭರವಸೆಯನ್ನು ಕೂಡ ನೀಡಿದ್ದಾರೆ. ಇದೀಗ ಈ ಫೋಟೋಸ್ ವೈರಲ್ ಆಗಿದೆ.