IPS Roopa vs Rohini ಐಪಿಎಸ್ ಅಧಿಕಾರಿ ಡಿ ರೂಪಾ(IPS Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(IAS Rohini Sindhuri) ಅವರ ನಡುವಿನ ಕಿತ್ತಾಟವು ಇದೀಗ ತಾರಕಕ್ಕೇರಿದೆ. ರಾಜ್ಯಮಟ್ಟದಿಂದ ಹಿಡಿದು ದೇಶ ವ್ಯಾಪಿಯಾಗಿ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿದ. ಸಾಮಾಜಿಕ ಜಾಲತಾಣಗಳಲ್ಲಿ ಡಿ ರೂಪಾ ಅವರು ಶೇರ್ ಮಾಡಿಕೊಂಡಂತಹ ರೋಹಿಣಿ ಸಿಂಧೂರಿಯವರ ವೈಯಕ್ತಿಕ ಫೋಟೋಗಳು ವೈರಲ್ ಆಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ನೋಟೀಸ್ ಜಾರಿ ಮಾಡುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈಗ ನಡೆಯುತ್ತಿರುವ ಇಬ್ಬರ ನಡುವಿನ ಕಚ್ಚಾಟವನ್ನು ಸರ್ಕಾರ ಕೂಡಾ ಬಹಳ ಗಂಭೀರವಾಗಿ ಪರಿಗಣಿಸಿದೆ. ಈಗ ಇಬ್ಬರಿಗೂ ಸ್ಪಷ್ಟನೆಯನ್ನು ಕೇಳುತ್ತಾ ಇಂದೇ ನೋಟೀಸ್ ಜಾರಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ರಾಜ್ಯದ ಇಬ್ಬರು ಪ್ರಮುಖ ಮಹಿಳಾ ಅಧಿಕಾರಿಗಳ ನಡುವಿನ ಕಿತ್ತಾಟದ ಕುರಿತಾಗಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ(Araga Gnanedra) ಅವರು ಪ್ರತಿಕ್ರಿಯೆ ನೀಡುತ್ತಾ, ಅಧಿಕಾರಿಗಳ ಇಂತಹ ವರ್ತನೆಗಳಿಂದ ನನಗೆ ಬಹಳ ಬೇಸರವಾಗಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಜನ ದೇವರೆಂದು ಭಾವಿಸುತ್ತಾರೆ. ಆದರೆ ಇವರಿಂದ ಎಲ್ಲಾ ಅಧಿಕಾರಿಗಳಿಗೂ ಅವಮಾನವಾಗುತ್ತಿದೆ ಎಂದಿದ್ದಾರೆ.
ಈಗಾಗಲೇ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಲಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದ್ದು, ಅದನ್ನು ಸಿಎಂ ತೆಗೆದುಕೊಳ್ಳುತ್ತಾರೆ. ಈ ಹಿಂದೆ ಕೂಡಾ ಈ ಇಬ್ಬರಿಗೆ ಇದೇ ರೀತಿಯಲ್ಲಿ ನೋಟಿಸ್ ನೀಡಲಾಗಿತ್ತು. ಆದರೆ ಅದಾದ ನಂತರವೂ ಇದು ಮುಂದುವರೆದಿದೆ ಎಂದು ಹೇಳಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಸಿಂಧೂರಿಯವರ ಅಭಿಮಾನಿಗಳು ರೂಪ ಅವರ ಮುಂದೆ 9 ಪ್ರಶ್ನೆಗಳನ್ನು ಇಟ್ಟು ಉತ್ತರ ನೀಡುವಂತೆ ಕೇಳಿದ್ದಾರೆ.