ಹಿಂದಿಯಲ್ಲಿ 100 ದಿನ ಪೂರೈಸಿದ ಕಾಂತಾರ: ಸಂಭ್ರಮ ಹಂಚಿಕೊಂಡ ರಿಷಭ್ ಶೆಟ್ಟಿ
ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿರುವ ಕನ್ನಡದ `ಕಾಂತಾರ’ (Kantara)/ಸಿನಿಮಾ ಮೊದಲು ಕನ್ನಡದಲ್ಲಿ ತೆರೆಗೆ ಬಂದು, ಇಲ್ಲಿ ಗಳಿಸಿದ ದೊಡ್ಡ ಯಶಸ್ಸಿನ ಬೆನ್ನಲ್ಲೇ ಕಾಂತಾರ ಬೇರೆ ಬೇರೆ ಭಾಷೆಗಳಲ್ಲಿ ಸಹಾ ಡಬ್ಬಿಂಗ್ ಆಗಿ ಬಿಡುಗಡೆ ಆಯಿತು. ಬಿಡುಗಡೆ ಆದ ಎಲ್ಲಾ ಭಾಷೆಗಳಲ್ಲೂ ಸಹಾ ಸಿನಿಮಾ ಭರ್ಜರಿ ಯಶಸ್ಸನ್ನು ಪಡೆದುಕೊಂಡಿತು. ಈಗ ಕಾಂತಾರ ಯಶಸ್ಸಿಗೆ ಮತ್ತೊಂದು ಗರಿ ಸೇರಿದೆ. ಹೌದು, ಕಾಂತಾರದ ಹಿಂದಿ(Kantara Hindi) ಅವತರಣಿಕೆಯ ಸಿನಿಮಾ ನೂರು ದಿನಗಳನ್ನು ಪೂರೈಸಿದೆ. ಬಾಲಿವುಡ್ ಅಂಗಳದಲ್ಲಿ ಕನ್ನಡ ಮೂಲದ ಸಿನಿಮಾ ಶತದಿನೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯವೇ ಆಗಿದೆ.
ಕಾಂತಾರ(Kantara) ಸಿನಿಮಾ ಬಾಲಿವುಡ್ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಾಂತಾರ ಹಿಂದಿಯಲ್ಲಿ ನೂರು ದಿನ ಪೂರೈಸಿದ ಸಂತಸದ ಸುದ್ದಿಯನ್ನು ರಿಷಬ್ ಶೆಟ್ಟಿ ಮತ್ತು ʻಹೊಂಬಾಳೆʼ ಚಿತ್ರ ನಿರ್ಮಾಣ ಸಂಸ್ಥೆ (Hombale films) ಹಂಚಿಕೊಂಡಿದೆ. ಕಾಂತಾರ ಸಿನಿಮಾದ ಈ ಸಕ್ಸಸ್ ಬಗ್ಗೆ ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆ ಟ್ವೀಟ್ ನಲ್ಲಿ, ಹಿಂದಿಯಲ್ಲಿ `ಕಾಂತಾರ’ 100 ದಿನಗಳನ್ನ ಪೂರೈಸಿದೆಯೆಂದು ಹೇಳಲು ನಾವು ಸಂಭ್ರಮಿಸುತ್ತೇವೆ. ಹಿಂದಿ ಚಿತ್ರರಂಗದ ಈ ಬೆಂಬಲಕ್ಕಾಗಿ ನಾವು ಪ್ರೇಕ್ಷಕರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇವೆ ಎಂದಿದ್ದು, ಫ್ಯಾನ್ಸ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸೆಪ್ಟೆಂಬರ್ 30, 2022 ರಂದು ಬಿಡುಗಡೆ ಆದ ಕಾಂತಾರ ಸಿನಿಮಾ ಅಪಾರವಾದ ಜನ ಮೆಚ್ಚುಗೆಯನ್ನು ಪಡೆದುಕೊಂಡಿತು. ಸಿನಿಮಾ ಬಗ್ಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಗಳ ಪರಿಣಾಮವಾಗಿ,ಅನ್ಯ ಭಾಷೆಗಳ ಸಿನಿ ಪ್ರೇಮಿಗಳ ಮನವಿಗೆ ಸ್ಪಂದಿಸಿ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿತ್ತು. ಇನ್ನು ಸಿನಿಮಾ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಮಾತನಾಡಿ, ಶೀಘ್ರದಲ್ಲೇ ಕಾಂತಾರ 2 ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎನ್ನುವ ಮಾತನ್ನು ಸಹಾ ತಿಳಿಸಿದ್ದಾರೆ.