Mangli: ಗಾಯಕಿ ಮಂಗ್ಲಿ ಮದುವೆ ಫಿಕ್ಸ್? ಸೋಷಿಯಲ್ ಮೀಡಿಯಾ ಗಾಸಿಪ್ ಗೆ ಉತ್ತರ ಕೊಟ್ಟ ಮಂಗ್ಲಿ

Written by Pooja Siddaraj

Published on:

ಖ್ಯಾತ ಗಾಯಕಿ ಮಂಗ್ಲಿ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಮಂಗ್ಲಿ ಅವರು ಮೂಲತಃ ತೆಲುಗು ಗಾಯಕಿ ಆದರೂ ಕೂಡ ಕನ್ನಡದಲ್ಲಿ ಸಹ ಅಷ್ಟೇ ಜನಪ್ರಿಯತೆ ಮತ್ತು ಹೆಸರು ಗಳಿಸಿದ್ದಾರೆ. ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದು ಇನ್ನು ಸಿಂಗಲ್ ಆಗಿರುವ ಮಂಗ್ಲಿ ಅವರ ಬಗ್ಗೆ ಇದೀಗ ಒಂದು ಹೊಸ ಸುದ್ದಿ ಕೇಳಿಬರುತ್ತಿದ್ದು, ಮಂಗ್ಲಿ ಅವರು ಭಾವನ ಜೊತೆಗೆ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ.

ಮಂಗ್ಲಿ ಅವರ ಕಂಚಿನ ಕಂಠದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇವರು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲದಿಂದ ಸಂಗೀತ ಕ್ಷೇತ್ರದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಬಳಿಕ ಖಾಸಗಿ ಆಲ್ಬಮ್ ಗಳಲ್ಲಿ ಹಾಡುತ್ತಿದ್ದ ಮಂಗ್ಲಿ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಶುರು ಮಾಡಿ ಜಾನಪದ ಗೀತೆಗಳನ್ನು ಹಾಡುತ್ತಾ ಜನಪ್ರಿಯತೆ ಪಡೆದುಕೊಂಡರು. ಬಳಿಕ ನಿರೂಪಕಿಯಾಗಿ ಕೂಡ ಮಂಗ್ಲಿ ಅವರಿಗೆ ಅವಕಾಶ ಸಿಕ್ಕಿತು.

ನಿರೂಪಣೆ ಜೊತೆಗೆ ಮಂಗ್ಲಿ ಅವರಿಗೆ ಸಿನಿಮಾಗಳಲ್ಲಿ ಹಾಡುವ ಅವಕಾಶ ಸಿಕ್ಕಿತು. ಮಂಗ್ಲಿ ಅವರು ಮೊದಲು ಹಾಡಿದ್ದು ತೆಲುಗಿನ ಶೈಲಜಾ ಗಾರಿ ಅಲ್ಲುಡು ಸಿನಿಮಾದಲ್ಲಿ. ನಂತರ ಕೆಲವು ತೆಲುಗು ಸಿನಿಮಾಗಳಲ್ಲಿ ಹಾಡಿದ್ದ ಮಂಗ್ಲಿ ಅವರಿಗೆ ಬಿಗ್ ಬ್ರೇಕ್ ಕೊಟ್ಟಿದ್ದು ರಾಬರ್ಟ್ ಸಿನಿಮಾದ ಹಾಡು ಎಂದರೆ ತಪ್ಪಲ್ಲ. ಕನ್ನಡದ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡಿನ ತೆಲುಗು ವರ್ಷನ್ ಅನ್ನು ಮಂಗ್ಲಿ ಹಾಡಿದರು. ಆ ಹಾಡು ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿತು.

ಈ ಒಂದು ಹಾಡಿನಿಂದ ಮಂಗ್ಲಿ ಅವರಿಗೆ ಕನ್ನಡದಲ್ಲಿ ಕೂಡ ಬೇಡಿಕೆ ಶುರುವಾಯಿತು. ಅರ್ಜುನ್ ಜನ್ಯ ಅವರು ಏಕ್ ಲವ್ ಯಾ ಸಿನಿಮಾದ ಎಣ್ಣೆಗೂ ಹೆಣ್ಣಿಗೂ ಹಾಡನ್ನು ಮಂಗ್ಲಿ ಅವರಿಂದಲೇ ಹಾಡಿಸಿದರು. ಪುಷ್ಪ ಸಿನಿಮಾದ ಊ ಅಂಟಾವ ಹಾಡಿನ ಕನ್ನಡ ವರ್ಷನ್ ಅನ್ನು ಹಾಡಿದ್ದರು. ಈ ರೀತಿಯಲ್ಲಿ ಮಂಗ್ಲಿ ಅವರಿಗೆ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಕೂಡ ಅವಕಾಶ ಮತ್ತು ಬೇಡಿಕೆ ಇದೆ. ಆಗಾಗ ಕೆಲವು ವಿಚಾರಗಳಿಂದ ಮಂಗ್ಲಿ ಅವರು ಸುದ್ದಿಯಾಗುತ್ತಾರೆ.

ಇದೀಗ ಮಂಗ್ಲಿ ಅವರ ಮದುವೆ ಬಗ್ಗೆ ಹೊಸದೊಂದು ಸುದ್ದಿ ಕೇಳಿಬಂದಿದೆ. ಅದೇನು ಎಂದರೆ, ಮಂಗ್ಲಿ ಅವರು ತಮ್ಮ ಸಂಬಂಧದಲ್ಲಿ ಭಾಗ ಆಗುವ ವ್ಯಕ್ತಿಯ ಜೊತೆಗೆ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವು ಜನರು ಸೋಷಿಯಲ್ ಮೀಡಿಯಾ ಮೂಲಕ ಮಂಗ್ಲಿ ಅವರಿಗೆ ವಿಶ್ ಮಾಡುತ್ತಿದ್ದಾರೆ. ಆದರೆ ಇದೀಗ ಇವರು ಮದುವೆ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ನನ್ನ ಮದುವೇನಾ? ಅಯ್ಯೋ ನನ್ನ ಕರ್ಮ.. ಮದುವೆನು ಇಲ್ಲ ಏನು ಇಲ್ಲ. ಇದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುಳ್ಳು ಸುದ್ದಿ, ನಾನು ಭಾವನ ಜೊತೆಗೆ ಮದುವೆ ಆಗ್ತೀನಿ ಅಂತ ಸುದ್ದಿ ಹಬ್ಬಿಸಿದ್ದಾರೆ. ಯಾರು ಆ ಭಾವ? ಆ ಭಾವ ಯಾರು ಅಂತ ಸುದ್ದಿ ಹಬ್ಬಿಸಿದವರನ್ನೇ ತೋರ್ಸೋಕೆ ಹೇಳಿ..” ಎಂದು ಗರಂ ಆಗಿದ್ದಾರೆ ಮಂಗ್ಲಿ. ಈ ಪ್ರತಿಕ್ರಿಯೆಯ ಮೂಲಕ ಎಲ್ಲಾ ವದಂತಿ ಫುಲ್ ಸ್ಟಾಪ್ ಇಟ್ಟಿದ್ದಾರೆ.

Leave a Comment