ಮತ್ತೆ ಬಂತು ಯುಗಾದಿ: ಹೊಸ ವರ್ಷದ ಆದಿಯಲ್ಲೇ ತಪ್ಪದೇ ತಿಳಿಯಬೇಕಾದ ಯುಗಾದಿಯ ಮಹತ್ವ

0
712

ಚೈತ್ರ-ಮಾಸ ವೆಂದರೆ ಪ್ರಕೃತಿಯಲ್ಲಿ ಹೊಸ ಚಿಗುರು ನಳನಳಿಸುವ ರಮ್ಯ ಕಾಲ. ಹಕ್ಕಿಗಳು ಇಂಪಾಗಿ ಹಾಡುವ ಸಂಭ್ರಮದ ಕಾಲ. ಪರಿಸರದಲ್ಲಿ ಹೊಸತನವನ್ನು ಕಾಣುವ ಮನೋಹರವಾದ ಕಾಲ. ಈ ಕಾಲದಲ್ಲೇ ಬರುತ್ತದೆ ಸಂತೋಷ ಹಾಗೂ ಸಂಭ್ರಮವನ್ನು ಹೊತ್ತು ತರುವ ಯುಗಾದಿ ಹಬ್ಬ.

ಚೈತ್ರಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಣೆ ಮಾಡಲಾಗುತ್ತದೆ. ಭಾರತದ ಅನೇಕ ಕಡೆಗಳಲ್ಲಿ ಯುಗಾದಿಯು ಹೊಸವರ್ಷದ ಆರಂಭವಾಗಿರುತ್ತದೆ. ಯುಗಾದಿ ಎನ್ನುವ ಪದವು ಯುಗ + ಆದಿ ಎನ್ನುವ ಎರಡು ಪದಗಳ ಸಮ್ಮಿಶ್ರಣವಾಗಿದ್ದು ಹೊಸ ಯುಗದ ಆರಂಭ ಎನ್ನುವ ಅರ್ಥವನ್ನು ನೀಡುತ್ತದೆ.

ಬ್ರಹ್ಮನು ಬ್ರಹ್ಮಾಂಡವನ್ನು ಸೃಷ್ಟಿಸಿದ ಸುದಿನ ಇದು ಎನ್ನಲಾಗಿದೆ. ಅಲ್ಲದೆ ಲಂಕಾಧೀಶ ರಾವಣನನ್ನು ಸಂಹಾರ ಮಾಡಿದ ಶ್ರೀರಾಮನು ಅಯೋಧ್ಯೆಗೆ ಹಿಂತಿರುಗಿದ ನಂತರ ಆತನ ಪಟ್ಟಾಭಿಷೇಕ ನಡೆದ ದಿನ ಕೂಡ ಇದು ಎನ್ನಲಾಗಿದೆ.

ಯುಗಾದಿ ಹಬ್ಬವು ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ವಿಶೇಷವಾದ ಹಬ್ಬವಾಗಿದ್ದು, ಇಲ್ಲಿ ಬಹಳ ವಿಜೃಂಭಣೆಯಿಂದ ಹಬ್ಬದ ಆಚರಣೆ ನಡೆಯುತ್ತದೆ‌. ಈ ದಿನ ಕರ್ನಾಟಕದಲ್ಲಿ ಜನರು ಬೇವು ಬೆಲ್ಲವನ್ನು ತಿಂದರೆ ಆಂಧ್ರದಲ್ಲಿ ಉಗಾದಿ ಪಚಡಿ ಎಂದು ಆರು ರುಚಿಗಳ ಪ್ರಸಾದವನ್ನು ತಯಾರಿಸಿ ಸೇವನೆ ಮಾಡುತ್ತಾರೆ.

ಈ ಆರು ರುಚಿಗಳು ಆರು ಭಾವಗಳ ಸಂಕೇತವಾಗಿದೆ.

ಬೇವು ಕಹಿಯನ್ನು, ಬೆಲ್ಲ ಸಿಹಿಯನ್ನು, ಮೆಣಸು ಕೋಪವನ್ನು, ಉಪ್ಪು ಭಯವನ್ನು, ಹುಣಸೇ ಅಸಮಾಧಾನವನ್ನು, ಮಾವು ಅಚ್ಚರಿಯನ್ನು ಸಂಕೇತಿಸುತ್ತದೆ. ಇನ್ನು ಈ ಪರ್ವ ದಿನದಂದು ಪ್ರತಿಯೊಬ್ಬರೂ ಅಭ್ಯಂಜನ ಸ್ನಾನ ಮಾಡಬೇಕು.

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಸಪ್ತ ಚಿರಂಜೀವಿಗಳ ನಾಮವನ್ನು ಸ್ಮರಿಸಬೇಕು. ಅಭ್ಯಂಜನದ ನಂತರ ಹೊಸ ಬಟ್ಟೆ ಧರಿಸಿ ಭಗವಂತನ ವಿಶೇಷ ಪೂಜೆಯನ್ನು ಮಾಡಿ, ಬೇವು ಬೆಲ್ಲ ಅಥವಾ ಯುಗಾದಿ ಪಚ್ಚಡಿಯ ಸೇವನೆ ಮಾಡುವುದು ವಾಡಿಕೆ. ಈ ದಿನ ಹೋಳಿಗೆಯ ಊಟ ವಿಶೇಷವಾಗಿರುತ್ತದೆ.

LEAVE A REPLY

Please enter your comment!
Please enter your name here