Jaggesh: ಇದೀಗ ನಮ್ಮ ರಾಜ್ಯದಲ್ಲಿ ವರ್ತೂರ್ ಸಂತೋಷ್ ಮತ್ತು ಡಿಬಾಸ್ ದರ್ಶನ್ ಅವರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರ್ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಲಾಗಿದೆ. ಅರಣ್ಯಾಧಿಕಾರಿಗಳು ವರ್ತೂರ್ ಸಂತೋಷ್ ಅವರ ಬಳಿ ಹುಲಿ ಉಗುರಿನ ಪೆಂಡೆಂಟ್ ಇರುವ ಚಿನ್ನದ ಚೈನ್ ಧರಿಸಿರುವುದಕ್ಕೆ ಅರೆಸ್ಟ್ ಮಾಡಿದ್ದಾರೆ.
ವರ್ತೂರ್ ಸಂತೋಷ್ ಅವರನ್ನು ವಿಚಾರಣೆ ನಡೆಸಿ, ಎಲ್ಲಾ ಮಾಹಿತಿ ಪಡೆದುಕೊಂಡ ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವರ್ತೂರ್ ಸಂತೋಷ್ ಅವರು ಜೈಲು ಸೇರಿದ್ದಾಗಿದೆ. ವರ್ತೂರ್ ಸಂತೋಷ್ ಅವರ ಮನೆಯವರು ಈ ವಿಚಾರದ ಬಗ್ಗೆ ಮಾತನಾಡಿ, ಅದು ಹುಲಿ ಉಗುರು ಎಂದು ಅವನಿಗೆ ಗೊತ್ತಿರಲಿಲ್ಲ, ಬೇಕು ಎಂದೇ ಈ ರೀತಿ ಯಾರೋ ಮಾಡಿದ್ದಾರೆ ಎಂದು ಹೇಳಿದ್ದಾರೆ.
ವಿಚಾರಣೆಯಲ್ಲಿ ತಿಳಿದುಬಂದಿರುವುದು ಏನು ಎಂದರೆ, 20,000 ರೂಪಾಯಿಗೆ ಹುಲಿ ಉಗುರು ಇರುವ ಪೆಂಡೆಂಟ್ ಅನ್ನು ಖರೀದಿ ಮಾಡಿದ್ದರಂತೆ. ಒಟ್ಟಿನಲ್ಲಿ ಈ ವಿಚಾರ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ವರ್ತೂರ್ ಸಂತೋಷ್ ಅವರ ನಂತರ ನಟ ದರ್ಶನ್ ಅವರ ಮೇಲೆ ಕೂಡ ದೂರು ದಾಖಲಾಯಿತು. ಸರ್ವ ಸಂಘಟನೆಗಳ ಅಧ್ಯಕ್ಷರಾದ ಶಿವಕುಮಾರ್ ಅವರು ನಟ ದರ್ಶನ್ ಮತ್ತು ವಿನಯ್ ಗುರೂಜಿ ಅವರ ಮೇಲೆ ವನ್ಯ ಜೀವುಗಳ ರಕ್ಷಣಾ ವೇದಿಕೆಗೆ ದೂರು ನೀಡಿದ್ದಾರೆ.
ಹುಲಿಯ ಉಗುರನ್ನು ಬಳಸುವುದು ತಪ್ಪು, ಯಾರಿಗೂ ಇಲ್ಲಿ ಬೇಧ ಭಾವ ಆಗಬಾರದು ಎಂದಿದ್ದಾರೆ. ನಟ ದರ್ಶನ್ ಅವರ ಬಳಿ ಹುಲಿ ಉಗುರಿನ ಪೆಂಡೆಂಟ್ ಇದೆ, ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕುಳಿತುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಅವರಿಬ್ಬರ ಮೇಲೆ ದೂರು ದಾಖಲು ಮಾಡಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆಯೇ, ಇದೀಗ ನಟ ಜಗ್ಗೇಶ್ ಅವರ ಬಗ್ಗೆ ನೆಟ್ಟಿಗರು ಮಾತನಾಡುವುದಕ್ಕೆ ಶುರು ಮಾಡಿದ್ದಾರೆ.
ನಟ ಜಗ್ಗೇಶ್ ಅವರು ಈ ಹಿಂದೆ ಒಂದು ಸಂದರ್ಶನದಲ್ಲಿ ತಮ್ಮ ಕತ್ತಿನಲ್ಲಿರುವ ಚಿನ್ನದ ಚೈನ್ ತೋರಿಸಿ, ‘ನನಗೆ 20 ವರ್ಷ ಆಗಿದ್ದಾಗ ನಮ್ಮಮ್ಮ ನನ್ನ ಮಗ ಹುಲಿ ಇದ್ದಂಗೆ ಅಂತ ನಿಜವಾದ ಹುಲಿ ಉಗುರಿನಿಂದ ಮಾಡಿಸಿ, ಈ ಸರ ಹಾಕಿದ್ದರು..’ ಎಂದು ಹೇಳುತ್ತಾರೆ. ಇದೀಗ ಜಗ್ಗೇಶ್ ಅವರು ಈ ಮಾತುಗಳನ್ನು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಜಗ್ಗೇಶ್ ಅವರ ಮೇಲೆ ದೂರು ಕೊಡೋದು ಯಾವಾಗ, ಜಗ್ಗೇಶ್ ಅವರು ಅರೆಸ್ಟ್ ಆಗೋದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.