ಕನ್ನಡದ ಹೆಸರಾಂತ ಮತ್ತು ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ(Raj B Shetty) ಇದೀಗ ಮಲಯಾಳಂ(Malayalam cinema) ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು, ಅಪಾರವಾದ ಅಭಿಮಾನವನ್ನು ಗಳಿಸಿರುವ ರಾಜ್ ಬಿ ಶೆಟ್ಟಿಯವರು ಇತ್ತೀಚಿಗಷ್ಟೇ ಸ್ಯಾಂಡಲ್ ವುಡ್ ನಟಿ ರಮ್ಯಾ(Ramya) ಅವರ ನಿರ್ಮಾಣದ ಮೊದಲ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಇದೀಗ ಅವರು ಮಲೆಯಾಳಂ ನ ಹೊಸ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದು ರಾಜ್ ಬಿ ಶೆಟ್ಟಿ ಅವರ ಮೊದಲ ಮಲಯಾಳಂ ಸಿನಿಮಾ ಆಗಿದ್ದು, ಈ ಚಿತ್ರಕ್ಕೆ ರುಧಿರಂ(Rudhiram) ಎನ್ನುವ ಹೆಸರನ್ನು ಇಡಲಾಗಿದೆ.

ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯವರು ಒಬ್ಬ ನಟನಾಗಿ ಮಾತ್ರವೇ ಕೆಲಸವನ್ನು ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಮಲೆಯಾಳಂ ಸಿನಿಮಾ ನಿರ್ದೇಶಕ ಜಿಶೋ ಲೋನ್ ಆಂಟೋನಿ(Jisho lon Antony) ನಿರ್ದೇಶನ ಮಾಡುತ್ತಿದ್ದಾರೆ. ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನಾಚರಣೆಯ ದಿನ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಈಗ ಸಿನಿಮಾದ ಚಿತ್ರೀಕರಣದ ಕಾರ್ಯಗಳ ಭರದಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣ ಬಾಲಮುರುಳಿ(Aparna Balamurali) ಅವರು ರಾಜ್ ಬಿ ಶೆಟ್ಟಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಯಾಂಡಲ್ ವುಡ್ ಗೆ ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಎಂಟ್ರಿ ನೀಡಿ, ಗಮನವನ್ನು ತನ್ನ ಕಡೆಗೆ ಸೆಳೆದು, ಹೆಸರನ್ನು ಪಡೆದವರು ರಾಜ್ ಬಿ ಶೆಟ್ಟಿ. ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಟನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದು, ಇವರು ರಿಷಬ್ ಶೆಟ್ಟಿ(Rishab Shetty) ಮತ್ತು ರಕ್ಷಿತ್ ಶೆಟ್ಟಿ(Rakshit Shetty) ಅವರ ತಂಡದಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ವಿಶೇಷವಾದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ಇವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿಗಳ ಬಳಗವನ್ನು ಪಡೆದಿದ್ದಾರೆ. ಕನ್ನಡದಲ್ಲಿ ಯಶಸ್ಸು ಮತ್ತು ಜನಪ್ರಿಯತೆ ಪಡೆದ ನಂತರ ಇದೀಗ ಮಲಯಾಳಂ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.