Siddumoolimani ಕನ್ನಡ ಕಿರುತೆರೆಯ ಲವ್ ಬರ್ಡ್ಸ್ ಆಗಿರುವ ಪಾರು ಸೀರಿಯಲ್ ನ ಪ್ರೀತು ಖ್ಯಾತಿಯ ನಟ ಸಿದ್ಧ ಮೂಲಿಮನಿ (Siddumoolimani) ಮತ್ತು ಗಟ್ಟಿ ಮೇಳದ ಅದಿತಿ ಖ್ಯಾತಿಯ ಪ್ರಿಯಾ ಆಚಾರ್ (Priya Achar) ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು, ಅದ್ದೂರಿಯಾಗಿ ನಡೆದ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸಿದ್ದರು. ಈಗ ಇದರ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮದ ನಡುವೆ ಸಿದ್ಧು, ಪ್ರಿಯಾಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದು, ಅಭಿಮಾನಿಗಳು ಮತ್ತೆ ಖುಷಿಯಾಗಿದ್ದಾರೆ.

ಖಾಸಗಿ ವಾಹಿನಿಯ ಹೊಸ ವರ್ಷದ ಶುಭಾರಂಭದ ಕಾರ್ಯಕ್ರಮದಲ್ಲಿ ಸಿದ್ದು(Siddu) ಪ್ರಿಯಾಗೆ(Priya) ಪ್ರಪೋಸ್ ಮಾಡಿದ್ದಾರೆ. ಈ ವೇಳೆ ಅವರು, ಪ್ರೀತಿ ಮತ್ತು ಮದುವೆ ವಿಚಾರ ಮಾತನಾಡಿದರೆ ಮಾತ್ರ ತುಂಬಾ ಸಂಕೋಚ ನಾಚಿಕೆ ಆಗುತ್ತದೆ ಎಂದಿದ್ದು, ನನಗೆ ಸ್ಟೇಜ್ ಭಯ ಇಲ್ವೇ ಇಲ್ಲ. ಆದರೆ ಮದುವೆ ವಿಷಯ ಯಾರಾದರೂ ಕೇಳಿದರೆ ನಾಚಿಕೆ ಆಗುತ್ತೆ ಎಂದು ಹೇಳಿದ್ದಾರೆ. ತಾವಿಬ್ಬರೂ ಸಹಾ ಡಿಕೆಡಿ ರಿಯಾಲಿಟಿ ಶೋ ಮೂಲಕ ಸ್ನೇಹಿತರಾಗಿದ್ದು, ಅನಂತರ ಧಮಾಕ ಶೂಟ್ ವೇಳೆ ಪ್ರೀತಿಯಾಯ್ತು ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ಬಹಳ ಕಾವ್ಯಾತ್ಮಕವಾಗಿ ಮಾತನಾಡಿದ್ದ ಸಿದ್ಧು,
ನಮ್ಮ ಮನದ ಮೂರು ಮುಖ್ಯ ಪದಗಳನ್ನು ಹೇಳುವ ಸಮಯ, ಅದನ್ನು ನಾನೇ ಹೇಳುವೆ. ಬಿಡು ನೀ ಭಯವ ನನಗೆ ಅರ್ಥ ಆಗುತ್ತೆ. ಇದು ಹೃದಯದ ವಿಷಯ, ಪ್ರೀತಿ ಅಂತ ಹೆಸರಿಡಲು. ನನ್ನ ಹುಡುಗಿ ಎಂದು ಕರೆಯಲು, ಇಲ್ಲ ಸಲ್ಲದ ಮಾತಾಡಲು ನಾನಲ್ಲ ಮಾಮೂಲು ಪ್ರೇಮಿ ಎಂದು ಹೇಳುತ್ತಾ, ಮಾತು ಮುಂದುವರೆಸಿದ ಅವರು, ಈ ಸಂಬಂಧಕ್ಕೆ ನಾವು ಹೆಸರೇನು ಇಟ್ಟಿಲ್ಲ. ನಾವು ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಲ್ಲ ಪ್ರೀತಿ ಅನ್ನೋ ವಿಚಾರ ಹೇಳಿಕೊಂಡಿಲ್ಲ. ಮನಸ್ಸಿನಲ್ಲಿ ಮಾತ್ರ ಮದ್ವೆ ಅನ್ನೋ ವಿಚಾರವಿತ್ತು.
ನಮ್ಮ ಭಾವನೆಗಳು ನಮ್ಮ ಮನೆಯಲ್ಲಿ ಸುಲಭವಾಗಿ ಗೊತ್ತಾಯಿತು. ಆಗ ಮದುವೆ ಮಾತುಕತೆ ಶುರುವಾಯ್ತು. ಆಗ ಬರೆದ ಕವಿತೆ ಕೊನೆ ಸಾಲುಗಳನ್ನು ಈಗ ಹೇಳುವೆ ಎನ್ನುತ್ತಾ, ಚಂದನೆಯ ಅರಸಿ ನೀನು. ನಾನು ನಿನ್ನ ಜನುಮ ಜನುಮದ ಸಾಮಿ, ನಿನ್ನನ್ನು ಪ್ರೀತಿಸುವೆ..ಮದುವೆ ಆಗುವೆಯಾ? ಎಂದು ಮಂಡಿಯೂರಿ ಸಿದ್ದು ಪ್ರಿಯಾಗೆ ಬಹಳ ಸುಂದರವಾಗಿ ಪ್ರಪೋಸ್ ಮಾಡಿದ್ದು ಅನಂತರ ಅವರು ಪ್ರಿಯಾಗೆ ಕಾಲ್ಗೆಜ್ಜೆಯನ್ನು ತೊಡಿಸಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.