Hamsalekha:ನಮ್ಮ ರಾಜ್ಯದಲ್ಲಿ ಕಾವೇರಿ ಸಮಸ್ಯೆ ಇರೋದು ಈಗಿನಿಂದ ಅಲ್ಲ, ಹಲವು ವರ್ಷಗಳಿಂದ ಕಾವೇರಿ ನೀರಿನ ಹಂಚಿಕೆ ಸಮಸ್ಯೆ ಬಗೆಹರಿಯದೆ ನಿಂತಿದೆ. ಕರ್ನಾಟಕದಲ್ಲಿ ಜನಿಸುವ ಕಾವೇರಿ ತಮಿಳುನಾಡಿಗೆ ಹರಿದು ಹೋಗುತ್ತಾಳೆ. ನಮ್ಮಲ್ಲಿ ಇರುವ ಕೆ.ಆರ್.ಎಸ್ ಡ್ಯಾಮ್ ಇಂದ ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡಬೇಕು. ನಮ್ಮ ರಾಜ್ಯದಲ್ಲಿ ಮಳೆ ಚೆನ್ನಾಗಿ ಬಂದಾಗ ನೀರು ಬಿಡಲು ಯಾವ ಸಮಸ್ಯೆ ಕೂಡ ಆಗೋದಿಲ್ಲ. ಆದರೆ ಮಳೆ ಬರದೆ ಇದ್ದಾಗ ಸಮಸ್ಯೆ ಶುರುವಾಗುತ್ತದೆ.
ಈಗಾಗಲೇ ನಮ್ಮ ರಾಜ್ಯದಲ್ಲಿ ಈ ವರ್ಷ ಮಳೆ ಸರಿಯಾಗಿ ಬರದೆ, ರೈತರಿಗೆ ಬೆಳೆ ನಾಶ, ನಷ್ಟ ಎಲ್ಲದರ ತೊಂದರೆ ಉಂಟಾಗಿದೆ. ನಮ್ಮ ರಾಜ್ಯದ ರೈತರು ಕಷ್ಟದಲ್ಲಿದ್ದಾರೆ, ಆದರೆ ತಮಿಳುನಾಡಿಗೆ ನೀರು ಬಿಡಬೇಕು ಎಂದು ನ್ಯಾಯಾಲಯದಿಂದ ಆದೇಶ ಬಂದಿದ್ದು, ಕೆ.ಆರ್.ಎಸ್ ಇಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಇದನ್ನು ವಿರೋಧಿಸಿ ಈಗ ನಮ್ಮ ರಾಜ್ಯದಲ್ಲಿ ಪ್ರತಿಭಟನೆ ಶುರುವಾಗಿದೆ. ರೈತರು, ಜನರು ಎಲ್ಲರೂ ಸೇರಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ..
ಕಳೆದ ವಾರ, ಒಂದೇ ವಾರದಲ್ಲಿ 2 ಸಲ ಬಂದ್ ಕೂಡ ನಡೆಯಿತು. ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ನಡೆದರೆ, ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ನಡೆಯಿತು. ಜನ ಸಾಮಾನ್ಯರು, ರೈತರು ಎಲ್ಲರೂ ಕೂಡ ಬಂದ್ ನಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಜನರು ಮಾತ್ರವಲ್ಲದೆ, ಸಿನಿಮಾರಂಗದ ಕಲಾವಿದರು ಕೂಡ ಕರ್ನಾಟಕ ಬಂದ್ ನಡೆದ ದಿನದಂದು ರಾಲಿ ಹಮ್ಮಿಕೊಂಡು, ಕಾವೇರಿ ಹೋರಾಟಕ್ಕೆ ಸಾಥ್ ನೀಡಿದರು.
ಶಿವಣ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವಣ್ಣ, ಹಂಸಲೇಖ, ದರ್ಶನ್, ಧ್ರುವ ಸರ್ಜಾ, ರಘು ಮುಖರ್ಜಿ, ಅನು ಪ್ರಭಾಕರ್, ಪೂಜಾ ಗಾಂಧಿ, ವಿಜಯ್ ರಾಘವೇಂದ್ರ, ಉಮಾಶ್ರೀ, ಪದ್ಮ ವಾಸಂತಿ ಸೇರಿದಂತೆ ಸಾಕಷ್ಟು ಕಲಾವಿದರು ಈ ರಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹಂಸಲೇಖ ಅವರು ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಬೇಕು ಎಂದು ಪರಿಹಾರ ಒಂದನ್ನು ನೀಡಿದ್ದಾರೆ..
ಕಲಾವಿದರ ಸಭೆಯಲ್ಲಿ ಮಾತನಾಡಿದ ಹಂಸಲೇಖ ಅವರು.. “10ನೇ ಶತಮಾನಕ್ಕೆ ಸೇರಿದ ಒಂದು ಶಾಸನದಲ್ಲಿ, ‘ಕಾವೇರಿ ಕಾಲುವೆಯನ್ ಕಡಂಗೊತ್ತಿಗಳನ್ ‘ ಎಂದು ಬರೆದಿದ್ದಾರೆ. 10ನೇ ಶತಮಾನದಲ್ಲೇ ತಿಗಳನ್ ಕಾವೇರಿ ನದಿಯನ್ನು ಅಡ ಇಟ್ಟುಕೊಂಡಿದ್ನಾ? ಎನ್ನುವ ಪ್ರಶ್ನೆ ಆಗಿದೆ. ಇದರ ಅರ್ಥ ಕಾವೇರಿ ಸಮಸ್ಯೆ ಈಗಿನದಲ್ಲ 10ನೇ ಶತಮಾನದಿಂದಲೂ ಇದೆ. ಈ ಸಮಸ್ಯೆಗೆ ಕಲಾವಿದರು ಪರಿಹಾರ ಕೊಡೋದಕ್ಕೆ ಆಗೋದಿಲ್ಲ. ಆದರೆ ಈ ಸಮಸ್ಯೆಯನ್ನ ಹೇಗೆ ಬಗೆಹರಿಸಬಹುದು ಎನ್ನುವುದನ್ನ ಒಂದು ಸ್ಕ್ರಿಪ್ಟ್ ಮಾಡಿಕೊಡಬಹುದು.
ಯಾವ ರೀತಿಯಲ್ಲಿ ಸಮಸ್ಯೆ ಪತಿಹಾರ ಮಾಡಬಹುದು ಎನ್ನುವುದನ್ನ ಒಂದು ಸ್ಕ್ರಿಪ್ಟ್ ಬರೆದು, ಒಂದು ಸಿನಿಮಾ ಮಾಡಿ, 0ಅದರ ಮೂಲಕ ಪರಿಹಾರ ನೀಡಿ. ಇಲ್ಲಿ ನಾವು ಎರಡು ವಿಷಯಗಳನ್ನ ನೋಡಬೇಕು, ಒಂದು ಸಂಸತ್ತು ಮತ್ತೊಂದು ನಾಡಿನ ಸಂಪತ್ತು. ಸಂಸತ್ತಿನಲ್ಲೇ ನಮ್ಮ ರಾಜ್ಯದ ಸಂಪತ್ತು ಇದೆ. ಅಲ್ಲೇ ಜಲವಿದೆ. ಜಲ ಮತ್ತು ಸಂಪತ್ತು ಎರಡಕ್ಕೂ ಸಂಬಂಧಿಸಿದ ನಿರ್ಧಾರ ನಡೆಯುವುದು ಸಂಸತ್ತಿನಲ್ಲಿ..ಈ ಸಮಸ್ಯೆಗೆ ಪರಿಹಾರ ಸಿಗುವುದು ಕೂಡ ಅಲ್ಲಿಯೇ..
ಪರಿಹಾರ ಹೇಗೆ ಆಗಬಹುದು ಎನ್ನುವುದನ್ನು ಸಿನಿಮಾ ಮತ್ತು ಕಲೆಯ ಮೂಲಕ ಸರ್ಕಾರದ ಎಲ್ಲರಿಗು ಅರ್ಥ ಆಗುವ ಹಾಗೆ ಮಾಡಬೇಕು. ಸಾಂಸ್ಕೃತಿಕವಾಗಿ ಬಂದಿರುವ ನಾವು ಬೇರೆ ಏನು ಮಾಡೋಕಾಗುತ್ತೆ? ಜಲ ಹೆಸರಿನ ಸಿನಿಮಾ, ನಿರ್ಮಾಣ ಮಾಡೋದು ವಾಣಿಜ್ಯ ಮಂಡಳಿ, ಸ್ಕ್ರಿಪ್ಟ್ ಮಾಡೋದು ನಾವು. ಚಂದನವನದ ಎಲ್ಲಾ ಕಲಾವಿದರು ಜೊತೆ ಸೇರಿ ಈ ನೀರನ್ನು ಉಳಿಸುವ ಸಮಸ್ಯೆಗೆ ಪರಿಹಾರ ನೀಡುವಂಥ ಒಂದು ಸಿನಿಮಾ ಮಾಡಿಕೊಡೋಣ. ಆ ಸಿನಿಮಾ ನೋಡಿ ಜನರ ಹೋರಾಟ ಮುಂದುವರೆಯಲಿ.
ಜಯ ಭಾರತ ಜನನಿಯ ತನುಜಾತೆ ಅಂತ ನಾಡಗೀತೆ ಬರೆದಿದ್ದಾರೆ. ಭಾರತ ಮಾತೆಗೆ ಒಟ್ಟು 29 ತನುಜಾತೆಯರಿದ್ದಾರೆ.. ನಮಗೆ ಏನೇ ತೊಂದರೆ ಆದರೆ ನಮ್ಮನ್ನ ನೋಡೋದು ತಾಯಿನೇ.. ಸಂಸತ್ತಿನಲ್ಲಿರುವ ಸಮಸ್ಯೆಗೆ ಪರಿಹಾರ ನೀಡುವಂಥ ಒಂದು ಸಿನಿಮಾ ಮಾಡೋಣ..” ಎಂದು ಪರಿಹಾರ ನೀಡಿದ್ದಾರೆ ನಾದಬ್ರಹ್ಮ ಹಂಸಲೇಖ.