ಬೆಂಗಳೂರಿನಲ್ಲಿ ಮಾಂಸಾಹಾರಿ ಹೋಟೆಲ್ ಗಳಿಗೆ ಏನು ಕಡಿಮೆ ಇಲ್ಲ. ಸಾಕಷ್ಟು ಹೋಟೆಲ್ ಗಳು ಈ ಊರಿನಲ್ಲಿವೆ. ಅವುಗಳ ಪೈಕಿ ಹೊಸಕೋಟೆ ಧಮ್ ಬಿರಿಯಾನಿ ಹೋಟೆಲ್ ಗಳಿಗೆ ಭಾರಿ ಬೇಡಿಕೆ ಇದೆ ಎಂದರೆ ತಪ್ಪಲ್ಲ. ಇಲ್ಲಿನ ಹೋಟೆಲ್ ಗಳಲ್ಲಿ ಸಿಗುವ ಬಿರಿಯಾನಿ ರುಚಿ ಜನರಿಗೆ ಅಚ್ಚುಮೆಚ್ಚು. ಹಾಗಾಗಿ ಹೊಸಕೋಟೆ ಧಮ್ ಬಿರಿಯಾನಿಯನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಇಲ್ಲಿನ ಹೋಟೆಲ್ ಮಾಲೀಕರು ಸರಿಯಾಗಿ ತೆರಿಗೆ ಪಾವತಿ ಮಾಡದೆ ತೆರಿಗೆ ಇಲಾಖೆಗೆ ಮೋಸ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..
ತೆರಿಗೆ ಇಲಾಖೆಗೆ ಈ ರೀತಿ ಜಿ.ಎಸ್.ಟಿ ವಿಚಾರದಲ್ಲಿ ಮೋಸ ನಡೆಯುತ್ತಿದೆ ಎಂದು ಗೊತ್ತಾದ ಬಳಿಕ ಸುಮಾರು 50 ಐಟಿ ಅಧಿಕಾರಿಗಳು ಹೊಸಕೋಟೆ ಧಮ್ ಬಿರಿಯಾನಿ ಹೋಟೆಲ್ ಗಳನ್ನು ರೈಡ್ ಮಾಡಿದ್ದಾರೆ. ಒಟ್ಟು 7 ಬಿರಿಯಾನಿ ಹೋಟೆಲ್ ಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ದಾಳಿಯಲ್ಲಿ ಬಿರಿಯಾನಿ ಹೋಟೆಲ್ ಮಾಲೀಕರ ಬಳಿ ಸುಮಾರು 1.40 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು ಐಟಿ ಅಧಿಕಾರಿಗಳು ಆ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಹೋಟೆಲ್ ನ ಓನರ್ ಗಳು ಜಿ.ಎಸ್.ಟಿ ವಿಷಯದಲ್ಲಿ ಮೋಸ ಮಾಡುತ್ತಿದ್ದರು ಎಂದು ಗೊತ್ತಾಗಿ ಅವರ ಮನೆಯನ್ನು ದಾಳಿ ಮಾಡುವ ವೇಳೆ 1.40 ಕೋಟಿ ಮೊತ್ತದ ನಗದು ಹಣ ಸಿಕ್ಕಿದೆ. ಹೊಸಕೋಟೆ ಪೊಲೀಸ್ ಠಾಣೆಗೆ ವ್ಯಾಪ್ತಿಗೆ ಬರುವ ಅಕ್ಷಯ್ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ, ಮಣಿ ಧಮ್ ಬಿರಿಯಾನಿ, ಆನಂದ್ ಧಮ್ ಬಿರಿಯಾನಿ ಸೇರಿದಂತೆ ಒಟ್ಟು 7 ಹೋಟೆಲ್ ಗಳ ಮೇಲೆ ದಾಳಿ ನಡೆದಿದೆ ಎಂದು ಮಾಹಿತಿ ಸಿಕ್ಕಿದ್ದು, ಹಲವೆಡೆ ಇನ್ಕಮ್ ಡಿಪಾರ್ಟ್ಮೆಂಟ್ ಅಧಿಕಾರಿಗಳು ಶೋಧನೆ ನಡೆಸಿದ್ದಾರೆ.
ಈ ಹೋಟೆಲ್ ಗಳಲ್ಲಿ ಹೆಚ್ಚು QR ಕೋಡ್ ಗಳನ್ನು ಬಳಸಿ, ಪಾವತಿ ಮಾಡುವ ಖಾತೆಯನ್ನು ಬದಲಾಯಿಸಿ ಹಣಕಾಸಿನ ವಹಿವಾಟುಗಳನ್ನು ನಡೆಸಲಾಗುತ್ತಿತ್ತು. ಒಂದು ಹೋಟೆಲ್ ನಲ್ಲಿ ಬರೋಬ್ಬರಿ 30 QR Code ಗಳನ್ನು ಇಟ್ಟುಕೊಂಡಿರುವ ಉದಾಹರಣೆ ಕೂಡ ಸಿಕ್ಕಿದೆ. ಹಾಗೆಯೇ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಹಾಗೆ ಸರಿಯಾದ ಲೆಕ್ಕ ಪತ್ರಗಳನ್ನು ಕೂಡ ನಿರ್ವಹಿಸಿರಲಿಲ್ಲ ಎಂದು ಗೊತ್ತಾಗಿದೆ.
ಬಿಲ್ ಗಳನ್ನು ಕೂಡ ಸರಿಯಾಗಿ ಕೊಡದೆ ಮೋಸ ಮಾಡಲಾಗುತ್ತಿತ್ತು. ಈ ಹೋಟೆಲ್ ಗಳ ಬಿರಿಯಾನಿಯನ್ನು ಜನರು ತುಂಬಾ ಇಷ್ಟಪಡುತ್ತಿದ್ದ ಕಾರಣ ಯಾವಾಗಲೂ ಜನರು ತುಂಬಿರುತ್ತಿದ್ದರು. ಹಾಗಾಗಿ ಮೋಸ ಮಾಡುವುದಕ್ಕೆ ಸಹ ಸುಲಭ ಆಗಿದೆ. ಈ ದಾಳಿ ಸಮಯದಲ್ಲಿ ರಾಜ್ ಧಮ್ ಬಿರಿಯಾನಿ ಅಂಗಡಿಯ ಮಾಲೀಕರಾದ ಶ್ರೀನಿವಾಸ್ ಮತ್ತು ರಾಜ್ ಎನ್ನುವ ಇಬ್ಬರನ್ನು ಬಂಧಿಸಲಾಗಿದೆ. ಇವರ ಬಳಿಯೇ 1 ಕೋಟಿಗಿಂತ ಹೆಚ್ಚಿನ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.